ಚೀನೀ - ಟಿಬೆಟನ್ ಭಾಷಾ ಪರಿವಾರ

	ಚೀನ, ಟಿಬೆಟ್, ಬರ್ಮ, ಥೈಲೆಂಡ್, ಸಯಾಮ್, ಇಂಡೋ-ಚೀನ ಮುಂತಾದ ದೇಶಗಳ ಕೆಲವು ಭಾಷೆಗಳು ಸೇರಿ ಆದ ಭಾಷಾಕುಟುಂಬ. ಇದರಲ್ಲಿ ಸುಮಾರು ನೂರ ಹದಿನೈದಕ್ಕೂ ಹೆಚ್ಚು ಭಾಷೆಗಳು ಸೇರುತ್ತವೆ. ಈ ಪರಿವಾರವನ್ನು ಕೆಲವು ವಿದ್ವಾಂಸರು ಚೀನೀ ಭಾಷಾ ಪರಿವಾರವೆಂತಲೂ ಚೀನೀ-ಟಿಬೆಟನ್ ಭಾಷಾಪರಿವಾರವೆಂತಲೂ ಏಕಾಕ್ಷರ ಪರಿವಾರವೆಂತಲೂ ಇಂಡೊ-ಚೀನೀ ಭಾಷಾ ಪರಿವಾರವೆಂತಲೂ ಕರೆದಿದ್ದಾರೆ. ಸದ್ಯಕ್ಕೆ ಇವನ್ನು ಕರೆಯುವುದು ವಾಡಿಕೆ. ಈ ಪರಿವಾರ ಜಗತ್ತಿನ ಹಿರಿಯ ಭಾಷಾಪರಿವಾರಗಳಲ್ಲಿ ಒಂದು. ಈ ಪರಿವಾರದ ಭಾಷೆಗಳನ್ನು ಆಡುವ ಜನರ ಸಂಖ್ಯೆಯನ್ನು ಆಧರಿಸಿ, ಹೇಳುವುದಾದರೆ, ಇಂಡೋ ಯೂರೋಪಿಯನ್ ಭಾಷಾ ಪರಿವಾರವನ್ನು ಬಿಟ್ಟರೆ, ಪ್ರಪಂಚದಲ್ಲಿ ಇದೇ ಎರಡನೆಯ ದೊಡ್ಡ ಭಾಷಾ ಪರಿವಾರವೆನಿಸಿಕೊಳ್ಳುತ್ತದೆ. ಇಡೀ ಏಷ್ಯಖಂಡದಲ್ಲಿಯೆ ಹೆಚ್ಚು ಜನ ಆಡುತ್ತಿರುವ ಭಾಷೆಗಳು ಈ ಪರಿವಾರಕ್ಕೆ ಸೇರಿದವಾಗಿವೆ. ಇದರಲ್ಲಿ ಚೀನೀ ಭಾಷಯೇ ಬಹು ಮುಖ್ಯವಾದುದು.

	ಚೀನೀ-ಟಿಬೆಟನ್ ಪರಿವಾರಕ್ಕೆ ಸೇರಿದ ಭಾಷೆಗಳನ್ನು ಮುಖ್ಯವಾಗಿ ಎರಡು ವರ್ಗಗಳಲ್ಲಿ ವಿಂಗಡಿಸಬಹುದು. ಒಂದು ಟಿಬೆಟೊ-ಬರ್ಮೀ ಭಾಷಾವರ್ಗ; ಮತ್ತೊಂದು ಟಿಬೆಟೊ-ಚೀನೀ ವರ್ಗ. ಕೆಲವು ವಿದ್ವಾಂಸರು ಈ ಭಾಷಾ ಪರಿವಾರವನ್ನು ಸಿನೋಟಿಬೆಟನ್ ಪರಿವಾರವೆಂದು ಕರೆದು ಟಿಬೆಟೊ-ಬರ್ಮೀ, ಟಿಬೆಟೊ-ಚೀನೀ ಮತ್ತು ಸ್ಯಾಮಿ-ಥೈ ಎಂದು ಮೂರು ವರ್ಗಗಳಾಗಿ ವಿಂಗಡಿಸಿದ್ದಾರೆ. ಮತ್ತೆ ಕೆಲವರು ಈ ಪರಿವಾರವನ್ನು ಚೀನೀ ಭಾಷಾಪರಿವಾರವೆಂದು ಕರೆದು ಇದನ್ನು ಚೀನೀ, ಸ್ಯಾಮಿ, ಟಿಬೆಟಿನ್ ಮತ್ತು ಬರ್ಮಿ ಬಾಷಾವರ್ಗಗಳೆಂದು ನಾಲ್ಕು ಬಗೆಯಲ್ಲಿ ವಿಂಗಡಿಸಿದ್ದಾರೆ. ಮೇಲಿನ ವರ್ಗೀಕರಣ ಏನೇ ಆಗಿದ್ದರೂ ಈ ಭಾಷೆಗಳಲ್ಲಿ ಕಂಡುಬರುವ ಕೆಲವು ಲಕ್ಷಣಗಳನ್ನು ಗಮನಿಸಿ ಟಿಬೆಟೊ-ಚೀನೀ ಮತ್ತು ಟಿಬೆಟೋ-ಬರ್ಮೀ ಭಾಷಾವರ್ಗಗಳೆಂದು ಎರಡಾಗಿ ವರ್ಗೀಕರಿಸುವುದು ಹೆಚ್ಚು ಸೂಕ್ತವಾಗಿ ತೋರುತ್ತದೆ.

	1 ಟಿಬೆಟೊ-ಚೀನೀ ಭಾಷಾವರ್ಗ : ಈ ವರ್ಗದಲ್ಲಿ ಚೀನಿ-ಸ್ಯಾಮಿ, ಮತ್ತು ಚೀನೀ-ಥಾಯ್ ಎಂಬ ಎರಡು ಭಾಷಾಸಮುದಾಯಗಳು ಇವೆ. ಈ ವರ್ಗಕ್ಕೆ ಸೇರಿದ ಭಾಷೆಗಳಲ್ಲಿ ಸ್ಯಾಮಿ, ಶಾನ್, ಕರೆನ್, ಚೀನಿ, ಲಾವೋ, ಅಹೋಮ್, ಖಾಮ್ತಿ, ಅನಾಮಿ, ಮುಅಂಗ್ ಮುಂತಾದ ಬಾಷೆಗಳು ಮುಖ್ಯವಾಗಿವೆ. ಇವುಗಳಲ್ಲಿ ಚೀನೀಯೆ ಬಹು ಮುಖ್ಯವಾದ ಭಾಷೆ. ಇದರಲ್ಲಿ ಸಯಾಮ್ ಚೀನ, ಇಂಡೋಚೀನ, ಥೈಲೆಂಡ್ ಮುಂತಾದ ದೇಶಗಳ ಭಾಷೆಗಳು ಸೇರಿಕೊಂಡಿವೆ. ಇವುಗಳ ಲಕ್ಷಣವನ್ನು ಪರಸ್ಪರ ಹೋಲಿಸಿದಾಗ ಇವು ಹೆಚ್ಚು ಕಡಿಮೆ ಒಂದೇ ಆಗಿರುವುದು ಕಂಡುಬರುತ್ತದೆ. ಈ ಭಾಷೆಗಳನ್ನು ಕುರಿತು ಆಳವಾಗಿ ಆಲೋಚಿಸಿದಾಗ ಇವು ಆಯೋಗಾತ್ಮಕ ವರ್ಗದ ಭಾಷೆಗಳಾಗಿ ಕಂಡುಬರುತ್ತವೆ. ಮಾತ್ರವಲ್ಲದೆ, ಒಂದೇ ಪದ ಹತ್ತಾರು ಬೇರ ಬೇರೆ ಅರ್ಥಗಳನ್ನು ಸೂಚಿಸಬಲ್ಲ ಶಕ್ತಿಯನ್ನು ಪಡೆದುಕೊಂಡಿರುವುದು ಕಾಣುತ್ತದೆ. ಎರಡಕ್ಕಿಂತ ಹೆಚ್ಚು ಪದಗಳು ಸೇರಿ ವಿವಿಧ ವಾಕ್ಯಗಳಾಗುವ ಸಾಧ್ಯತೆ ಈ ಭಾಷೆಗಳಿಗಿಲ್ಲ. ಪ್ರತಿಯೊಂದು ಪದವೂ ಸಾಮಾನ್ಯವಾಗಿ ಒಂದೇ ಅಕ್ಷರ ಉಳ್ಳದ್ದಾಗಿರುತ್ತದೆ. ಒಂದೇ ಸ್ಥಾನದಲ್ಲಿರುವ ಪದವನ್ನು ಉಚ್ಚಾರಣೆಯಲ್ಲಿ ಮಾತ್ರ ವ್ಯತ್ಯಾಸ ಮಾಡಿದರೆ ಅದು ಬೇರೆ ಬೇರೆ ಅರ್ಥವನ್ನು ಕೊಡುತ್ತದೆ. ಒಂದೇ ಪದ ಇಲ್ಲಿ ನಾಮಪದ, ಕ್ರಿಯಾಪದ, ವಿಶೇಷಣ, ಕ್ರಿಯಾವಿಶೇಷಣವಾಗಿ ಕಾರ್ಯನಿರ್ವಹಿಸಬಲ್ಲದು. ಈ ಭಾಷೆಗಳಿಗೆ ಯಾವ ಒಂದು ನಿಯಮಬದ್ಧವಾದ ವ್ಯಾಕರಣವಿದ್ದಂತಿಲ್ಲ. ಕೆಲವು ಭಾಷೆಗಳಲ್ಲಿ ವ್ಯಾಕರಣಗಳು ಇವೆಯಾದರು ಅವುಗಳಲ್ಲಿ ಒಂದೇ ಬಗೆಯ ನಿಯಮ ಕಂಡುಬರುವುದಿಲ್ಲ. ಈ ಭಾಷೆಗಳಲ್ಲಿ ಅನುನಾಸಿಕ ಧ್ವನಿಗಳೇ ಹೆಚ್ಚು. ಇವನ್ನು ಟಿಬೆಟೋ-ಬರ್ಮೀ ಭಾಷಾವರ್ಗದ ಭಾಷೆಗಳೊಡನೆ ಹೋಲಿಸಿದಾಗ ಇವು ಸ್ವಲ್ಪ ಬೇರೆಯಾಗಿ ಕಂಡುಬರುತ್ತವೆ. ಮೂಲ ಲಕ್ಷಣಗಳು ಈ ಭಾಷೆಗಳಲ್ಲಿ ಇಲ್ಲದಿದ್ದರೂ ವ್ಯಾಕರಣ ವಿಚಾರಗಳಲ್ಲಿ ಇವು ಚೀನಿ-ಸ್ವಾಮಿ ಭಾಷೆಗಳನ್ನೇ ಹೆಚ್ಚಾಗಿ ಹೋಲುತ್ತವೆ ಎನ್ನಬಹುದು. ಈ ವರ್ಗದ ಮಂಡರಿನ್, ಪೊಂಚೊ ನಿಂಗ್‍ಪೊ ಸ್ವತೊವೆಂಚೊ, ಮೆಹಸ್ಸೀನ್ ಮುಂತಾದ ಚೀನಿ ಉಪಭಾಷೆಗಳು ಬಹುಮಟ್ಟಿಗೆ ಹೆಚ್ಚು ಪ್ರಚಾರದಲ್ಲಿವೆ.
	2 ಟಿಬೆಟೊ-ಬರ್ಮೀ ಭಾಷಾವರ್ಗ : ಈ ವರ್ಗಕ್ಕೆ ಸೇರಿದ ಭಾಷೆಗಳನ್ನು ಮುಖ್ಯವಾಗಿ ಮೂರು ಗುಂಪುಗಳಾಗಿ ವಿಂಗಡಿಸಬಹುದು. ಟಿಬೆಟೊ ಹಿಮಾಲಯನ್ ಬಾಷಾ ಸಮುದಾಯ, ಉತ್ತರ ಅಸ್ಸಾಮಿ ಭಾಷಾ ಸಮುದಾಯ, ಅಸ್ಸಾಮಿ-ಬರ್ಮೀ ಭಾಷಾ ಸಮುದಾಯ. ಭಾರತ, ಚೀನ, ಬರ್ಮ ಮುಂತಾದ ದೇಶಗಳಲ್ಲಿ ಈ ಭಾಷೆಗಳು ಹೆಚ್ಚಾಗಿ ಕಂಡುಬರುತ್ತವೆ. ಚೀನ ಮತ್ತು ಭಾರತದ ನಡುವೆ ಇರುವ ಟಿಬೆಟ್ಟಿನ ಕೆಲವು ಭಾಗಗಳಲ್ಲಿ ಈ ಭಾಷೆಗಳನ್ನು ಆಡುವ ಜನ ಹೆಚ್ಚಾಗಿದ್ದಾರೆ. ಈ ಭಾಷೆಗಳು ಸಾಮಾನ್ಯವಾಗಿ ಚೀನೀ-ಸ್ಯಾಮಿ ಭಾಷೆಗಳಲ್ಲಿ ಕಂಡುಬರುವ ಕೆಲವು ಲಕ್ಷಣಗಳನ್ನು ಪಡೆದಿವೆಯಾದರೂ ಈ ವರ್ಗಕ್ಕೆ ಸೇರಿದ ಕೆಲವು ಇತರ ಭಾಷಾ ಪ್ರಭಾವಗಳ ಕಾರಣದಿಂದದಾಗಿ ಮೂಲ ಲಕ್ಷಣವನ್ನು ಕಳೆದುಕೊಂಡಿವೆ. ಇವುಗಳಲ್ಲಿ ಕೆಲವು ತಮ್ಮದೇ ಆದ ಸಾಹಿತ್ಯವನ್ನು ಹೊಂದಿವೆ. ಬ್ರಾಹ್ಮೀ ಮತ್ತು ಖರೋಷ್ಠಿ ಲಿಪಿಗಳ ಮೂಲಕವೇ ಈ ಭಾಷೆಗಳ ಲಿಪಿಗಳಿಗೂ ಮೂಲವಿರಬಹುದೆಂದು ಸುಲಭವಾಗಿ ಊಹಿಸಬಹುದು. ಚೀನ, ಸಯಾಮ್, ಥೈಲೆಂಡ್ ಮುಂತಾದ ದೇಶದ ಭಾಷೆಗಳಲ್ಲಿನ ಕೆಲವು ಭಾಷೆಗಳು ಕೂಡ ಈ ಟಿಬೆಟೊ-ಬರ್ಮೀ ಭಾಷಾವರ್ಗದ ಲಕ್ಷಣವನ್ನು ಹೋಲುತ್ತವೆ.

	ಟಿಬೆಟೊ-ಬರ್ಮೀ ಬಾಷಾವರ್ಗಕ್ಕೆ ಸೇರಿದ ಭಾಷೆಗಳನ್ನು ಹೀಗೆ ವರ್ಗೀಕರಿಸಬಹುದು.

	(ಅ) ಟಿಬೆಟೊ-ಹಿಮಾಲಯನ್ ಭಾಷಾಸಮುದಾಯ : 

1. ಪಶ್ಚಿಮೀ ವರ್ಗ : ಮುಂಚಾಟಿ, ಛಂಭಾ, ಲಾಹುಲಿ, ಬುನ್ನ, ರಂಗ್ ಲೋಯಿ, ಕನಾಶೀ, ಕಸೌರಿ, ರಂಗ್‍ಕಾಸ್, ದರ್ಮಿಯಾ, ಚೌದಂಗ್‍ಸೀ ಮುಂತಾದ ಭಾಷೆಗಳು.

2. ಪೂರ್ವೀವರ್ಗ : ಧೀಮಾಲ್, ಥಾಮೀ, ಲಿಂಬೂ, ಯಾಖಾ, ಖಂಬು, ಜಿಮ್‍ದಾರ್, ಚೆಪಾಂಗ್, ಗುರುಂಗ್, ಮರ್ಮೀ, ಸುನ್ವರ್, ನೇವಾರಿ ಇತ್ಯಾದಿ ಭಾಷೆಗಳು. 

(ಆ) ಉತ್ತರೀ ಅಸ್ಸಾಮಿ ಭಾಷಾ ಸಮುದಾಯ : ಅಕ್, ಧಫ್‍ಲ, ಅಬೋರ್ ಮಿರಿ ಮುಂತಾದ ಭಾಷೆಗಳು.
(ಇ) ಅಸ್ಸಾಮಿ-ಬರ್ಮೀ ಭಾಷಾ ಸಮುದಾಯ : 

1 ಬೋಡೋನಾಗಾ : ಕಛಾರಿ, ಲಾಲುಂಗ್, ದಿಮಾಸಾ, ಗಾಕೋ, ರಾಭಾ, ತ್ರಿಪುರ ಮುಂತಾದ ಭಾಷೆಗಳು. 
2 ಅಂಗಾಮಿ-ನಾಗಾಭಾಷಾವರ್ಗ ; 

(ಚಿ) ಪಶ್ಚಿಮೀ ವರ್ಗ : ಅಂಗಾಮೀ, ಸೇಮಾ ಮುಂತಾದ ಭಾಷೆಗಳು ಸೇರಿವೆ. 

(b) ಮಧ್ಯ ವರ್ಗ; ಅ ಓ, ತೆನ್‍ಸ್ಸಾನಾಗ, ಮುಂತಾದ ಭಾಷೆಗಳು ಇವೆ. 
(ಛಿ) ಪೂರ್ವೀ ವರ್ಗ : ಅಂಗ್‍ವಾಂಕ್, ತಮ್ಲ, ಬಗ್‍ಪರಾ, ಮುತೋನಿಆ, ನಮ್‍ಸಂಗೀಯ, ಚಾಂಗ್ ಮುಂತಾದ ಭಾಷೆಗಳು ಸೇರಿವೆ.

3 ನಾಗ ಕುಕಿ-ಚಿನ್ ಭಾಷಾ ವರ್ಗ : ಕುಕಿ, ಚಿನ್ ಮುಂತಾದ ಭಾಷೆಗಳು ಸೇರಿವೆ. 

	ಟಿಬೆಟೊ-ಬರ್ಮೀ ಭಾಷಾವರ್ಗಕ್ಕೆ ಸೇರಿದ ಎಲ್ಲ ಭಾಷೆಗಳನ್ನೂ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅವುಗಳಲ್ಲಿ ಚೀನೀ ಭಾಷೆಯ ಕೆಲವು ಗುಣಗಳು ಕಂಡುಬರುತ್ತವೆಯಾದರೂ ಕೆಲವು ಭಾಷೆಗಳಲ್ಲಿ ಆ ಗುಣಗಳು ಈಗ ಮಾಯವಾಗಿದೆ. ಈ ವರ್ಗದ ಕೆಲವು ಭಾಷೆಗಳು ಸಾಹಿತ್ಯ ಹಾಗೂ ಲಿಪಿ ಸೌಲಭ್ಯವನ್ನು ಪಡೆದುಕೊಂಡಿವೆ. ಹಿಮಾಲಯನ್ ಭಾಷಾಸಮುದಾಯದ ಕೆಲವು ಭಾಷೆಗಳಲ್ಲಿ ಮಾತ್ರ ಇಂಡೋಆರ್ಯನ್ ಭಾಷಾ ಪರಿವಾರದ ಕೆಲವು ಮುಖ್ಯ ಲಕ್ಷಣಗಳು ಕಂಡುಬರುತ್ತವೆ.

	ಭಾರತದ ಹಲವಾರು ಕಡೆಗಳಲ್ಲಿ ಚೀನೀ-ಟೆಬೆಟನ್ ಪರಿವಾರಕ್ಕೆ ಸೇರಿದ ಭಾಷೆಗಳನ್ನು ಆಡುವ ಜನರಿದ್ದಾರೆ. ಭಾರತ ಹಾಗೂ ಟಿಬೆಟ್ ದೇಶಗಳ ನಡುವೆ ಕಂಡಬರುವ ಹಲವಾರು ಕಡೆಗಳಲ್ಲಿ ಚೀನೀಭಾಷೆಯನ್ನು ಅಸ್ಸಾಮಿನ ಕೆಲವು ಕಡೆಗಳಲ್ಲಿ ಕುಕಿಚಿನ್, ಅಂಗಾಮಿ, ಸೇಮಾ ಕಚಾರಿ ಮುಂತಾದ ಭಾಷೆಗಳನ್ನು ತ್ರಿಪುರ ಮುಂತಾದ ಕಡೆಗಳಲ್ಲಿ ತ್ರಿಪುರಿ, ರಾಭಾ, ಆಕ್, ಮಿರಿ ಮುಂತಾದ ಭಾಷೆಗಳನ್ನು ಹಿಮಾಲಯನ್ ಭೂಭಾಗದಲ್ಲಿ ಚಂಬಾ, ಲಾಹುಲಿ, ಕಸೌರಿ ಮುಂತಾದ ಭಾಷೆಗಳನ್ನು, ನೇಪಾಳ, ಭೂತಾನ ಮುಂತಾದ ಪ್ರದೇಶಗಳಲ್ಲಿ ಈ ವರ್ಗಕ್ಕೆ ಸೇರಿದ ಹಲವಾರು ಭಾಷೆಗಳನ್ನು-ಆಡುವ ಜನ ಅಲ್ಲಲ್ಲಿ ಕಂಡುಬರುತ್ತಾರೆ. ಹಾಗೆಯೇ ಬಾಂಗ್ಲಾ, ಪಶ್ಚಿಮಬಂಗಾಳ, ಅಸ್ಸಾಮಿನ ಹಲವಾರು ಕಡೆಗಳಲ್ಲಿ ಬರ್ಮಿಭಾಷೆಗಳನ್ನು ಆಡುವ ಜನರನ್ನು ಕಾಣಬಹದು.
(ಕೆ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ